ಕೊರವ ಮೀನು	
  
ಚನ್ನಾ ಅಥವಾ ಓಫಿಯೊಸಿಫ್ಯಾಲಸ್ ಪಂಕ್ಟೇಟಸ್ ಎಂಬ ಶಾಸ್ತ್ರೀಯ ಹೆಸರಿನ ಸಿಹಿನೀರು ಮೀನು. ಓಫಿಯೊಸಿಫ್ಯಾಲಿಫಾರ್ಮೀಸ್ ಗಣದ ಓಫಿಯೊಸಿಫ್ಯಾಲಿಡೀ ಕುಟುಂಬಕ್ಕೆ ಸೇರಿದೆ. ಕೆರೆಗಳಲ್ಲಿ ಜಲಾಶಯಗಳಲ್ಲಿ ಇದರ ವಾಸ. ಸುಮಾರು 1 ಅಡಿ ಉದ್ದಕ್ಕೆ ಬೆಳೆಯುವ ಈ ಮೀನು ತನ್ನ ಹತ್ತಿರ ಸಂಬಂಧಿಯಾದ ಕುಚ್ಚುಮೀನನ್ನು ಬಹುವಾಗಿ ಹೋಲುತ್ತದೆ. ಇದರ ದೇಹದ ಬೆನ್ನುಭಾಗ ಕಂದು ಬಣ್ಣದ್ದಾಗಿಯೂ ಉದರಭಾಗ ತಿಳಿ ಕಂದು ಬಣ್ಣದ್ದಾಗಿಯೂ ಇದೆ. ಪಾಶ್ರ್ವರೇಖೆಯ ಮೇಲೆ ಕಪ್ಪುಬಣ್ಣದ 8 ಪಟ್ಟೆಗಳಿವೆ. ಪಾಶ್ರ್ವರೇಖೆಯ ಕೆಳಭಾಗದಲ್ಲಿಯೂ ಅಷ್ಟೇ ಸಂಖ್ಯೆಯ ಪಟ್ಟೆಗಳಿದ್ದು ಇವು ಮೇಲಿನ ಪಟ್ಟೆಗಳಿಗೆ ಪರ್ಯಾಯವಾಗಿ ಜೋಡಣೆಯಾಗಿವೆ. ಸಣ್ಣ ಮೀನುಗಳು, ಜಲವಾಸಿ ಕೀಟಗಳು, ಚಿಗಟಗಳು ಮತ್ತು ಸೀಗಡಿ ಈ ಮೀನಿನ ಪ್ರಧಾನ ಆಹಾರ. ಆಗಾಗ್ಗೆ ಸಣ್ಣಗಾತ್ರದ ಕಪ್ಪೆಚಿಪ್ಪಿನ ಪ್ರಾಣಿಗಳನ್ನು ತಿನ್ನುವುದುಂಟು. ಜೂನ್-ಅಕ್ಟೋಬರ್ ತಿಂಗಳುಗಳ ನಡುವಣ ಕಾಲದಲ್ಲಿ ಸಂತಾನಾಭಿವೃದ್ಧಿಯಾಗುತ್ತದೆ. ಮರಿಗಳು ಕುಚ್ಚುಮೀನಿನ ಮರಿಗಳಂತೆಯೇ ಮೊದಲನೆಯ ವರ್ಷದಲ್ಲಿಯೇ ಲೈಂಗಿಕ ಪ್ರಬುದ್ಧಾವಸ್ಥೆಯನ್ನು ತಲಪುತ್ತವೆ. ಕೊರವಮೀನು ಅತಿರುಚಿಯಾದ ಆಹಾರವೆಂದು ಪರಿಗಣಿಸಲ್ಪಟ್ಟಿದೆ. ಸಣ್ಣಮೀನು, ಸೀಗಡಿ, ಎರೆಹುಳುಗಳನ್ನು ಉಪಯೋಗಿಸಿ ದಾವಣಿ ಬಲೆಗಳ ಸಹಾಯದಿಂದ ಈ ಮೀನನ್ನು ಹಿಡಿಯುತ್ತಾರೆ. 		(ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ